Friday, December 14, 2007

ಒಂದು ಸಂಭಾಷಣೆ

ಮೊನ್ನೆ ಯಾವುದೋ ಕೆಲಸದಲ್ಲಿ ತೊಡಗಿದ್ದಾಗ ಯಾರದೋ ದೂರವಾಣಿ ಕರೆ ಬಾ ಬಾ ಎಂದು ಕರೆಯಿತು. ನಾನು ಕರೆದರೆ ಕರೆಯಲಿ, ನನ್ನ ಕೆಲಸ ಮುಗಿಸಿ ಹೋಗುತ್ತೇನೆ ಎಂದು ಹೋಗಲಿಲ್ಲ.ನಂತರ ನನ್ನ ಕೆಲಸದಲ್ಲಿ ನನ್ನನ್ನೇ ಮರೆತಿದ್ದವಳಿಗೆ, ಆ ದೂರವಾಣಿ ಕರೆಯ ನೆನಪಾಗಿ ನೋಡಿದರೆ ಯಾರದೋ ಅಪರಿಚಿತ ಸಂಖ್ಯೆ. ಯಾರೋ ಎನೋ ಸುಮ್ಮನಾಗಿ ಬಿಡುವಾ ಎಂದೆನೆಸಿದರೂ, ಈ ಮನಸ್ಸು ಕೇಳಬೇಕೇ!!ಮನಸ್ಸಿನ ಕರೆಗೆ ಓಗೊಟ್ಟು ನಾನೆ ಕರೆ ಮಾಡಿದೆ.
ನಮ್ಮ ಸಂಭಾಷಣೆ ಹೀಗಿದೆ:

ಅಪರಿಚಿತೆ(ಆ ಕಡೆಯಿಂದ): ಹಲ್ಲೋ..
ನಾನು(ಈ ಕಡೆಯಿಂದ!!): ಹಲ್ಲೋ..ಯಾರು ಮಾತಾಡ್ತಿರೋದು....!?
(ಓ ದೇವರೆ,ನಾನೆ ಅವಳಿಗೆ ಕರೆ ಮಾಡಿ, ಹೀಗೆ ಕೇಳುವ ದೌರ್ಭಾಗ್ಯ ಬಂತಲ್ಲ!)
ಅಪರಿಚಿತೆ: ...... (ಬಹುಶಃ ಕಂಗಾಲು ಅಗಿರಬೇಕು)
ನಾನು: ಈಗ ಸ್ವಲ್ಪ ಹೊತ್ತಿನ ಮೊದಲು ನನಗೆ ಈ ಸಂಖ್ಯೆಯಿಂದ ಕರೆ ಬಂದಿದೆ. ತಾವು ಯಾರು ಮಾತಾಡ್ತಿರೊದು ಅಂತ ತಿಳ್ಕೋಬಹುದಾ?
ಅಪರಿಚಿತೆ: (ಸಣ್ಣನೆಯ ಧ್ವನಿಯಲ್ಲಿ) ನಾನು ರಜ್ವಿಂದರ್ ಅಂತಾ.
ನಾನು: (ಮನಸ್ಸಿನಲ್ಲೆ) ನನಗೆ ಯಾವ ಯಾವ ರಜ್ವಿಂದರ್ ಅನ್ನುವವರು ಗೊತ್ತಿದ್ದಾರೆ ಎಂದು ನನ್ನ ನೆನಪಿನ ಕದವನ್ನು ತಟ್ಟುತ್ತಿದ್ದೆ..ಈ ನನ್ನ ನೆನಪಿನ ಶಕ್ತಿಯೋ..ದೇವರಿಗೆ ಪ್ರೀತಿ.. ಏನು ಮಾಡಿದ್ರೂ ನೆನಪಾಗ್ತ ಇಲ್ವಲ್ಲ..ಯಾರೀಕೆ..ಅದೂ ಅಮೆರಿಕದಂತಹ ಪರದೇಶ ದಲ್ಲಿ...
ಮತ್ತೆ ಕೇಳಿದೆ...ಯಾರು?
ರಜ್ವಿಂದರ್: ನಾನು ರಜ್ವಿಂದರ್!!
ನನಗೆ ಈ ಉತ್ತರ ಕೇಳಿ, ಸ್ವಲ್ಪ ಶಾಂತ ಸ್ವಭಾವಳಾದ(?)ನಾನು ಶಾಂತತೆಯನ್ನು ಶಮನ ಮಾಡಿಕೊಂದು(?),ಸ್ವಲ್ಪ ಜೋರಾಗಿ,
ಯಾರ್ರೀ ನೀವು?..ಯಾವ ರಜ್ವಿಂದರ್ ಅಂತ ಕೇಳಿದ್ದೇ, ನನ್ನ ನೆನಪು ಅದೆಲ್ಲಿ ಅಡಗಿ ಕುಳಿತುಗೊಂಡಿತ್ತೋ,ಎಂದೂ ನೋಡರಿಯದ,ಆದ್ರೆ ಕೇಳಿದ್ದ ನನ್ನ ಪತಿದೇವರ ಕಂಪನಿ ಯಲ್ಲಿ ಕೆಲಸ ಮಾಡುವವ ರಜ್ವಿಂದರ್ ಇವಳೇ ಎಂದು ತಟ್ಟಿ ತಟ್ಟಿ ಹೇಳಿತು..
ಆವಾಗ,
ನಾನು: ಒಹ್..sorry..sorry...
ನಂಗೆ ನೀವು ಅಂತ ಗೊತ್ತಾಗ್ಲೆ ಇಲ್ಲಾ..ತುಂಬ sorry ಕಣ್ರೀ..
ಚೆನ್ನಾಗಿದೀರ? ನಿಮ್ಮನ್ನು ಭೇಟಿ ಆಗಿದ್ದು ತುಂಬಾ ಸಂತೊಷ(!)ಆಯ್ತು...ಹೀಗೆ ನನ್ನದು ಮುಂದುವರೀತಾ ಇತ್ತು...
ಆದ್ರೆ ಅವಳಿಗೂ ಸಾಕಗಿರಬೇಕು ನನ್ನ ಆವಾಂತರ ನೊಡಿ..ಎನೂ ಹೇಳದೇ 'ಬೈ' ಆಂತ ಹೇಳಿ ದೂರವಾಣಿ ಕೆಳಗಿಟ್ಟಳು!!!

ಜೀವನದಲ್ಲಿ ಇಂಥಾ ಎಷ್ಟೋ ಘಟನೆಗಳು ನಮಗೆ ತಿಳಿಯದಂತೆ(ತಿಳಿದರೂ ತಿಳಿದಿಲ್ಲದವರಂತೆ :))ನಡೆಯುತ್ತಿರುತ್ತವೆ,ನಡೆದು ಹೋಗಿರುತ್ತವೆ.
ಈ ಲೇಖನ ಸುಮ್ಮನೆ ನನ್ನ ನೆನಪಿಗಾಗಿ.

2 comments:

Sushrutha Dodderi said...

ಪ್ರಿಯ ಕವಿತಾ,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

Santhosh Rao said...

ರೀ ಕವಿತಾ ...ಈ ತರದ ಟೆಲಿಫೋನ್ ನೆನಪು ಸಾಕಸ್ಟಿರತ್ತೆ.. ಬೇರೆ ಏನಾದ್ರು ನೆನಪಿನ ಕಥೆ ಇದ್ರೆ ಹೇಳಿ ..!!